ಶಿವದರ್ಶನ ಪಡೆದ ಕಾಳಂಭಟ್ಟ

ಶ್ರೀ ಮಾಣಿಕಪ್ರಭುಗಳ ಬಾಲ್ಯವು ಬಸವಕಲ್ಯಾಣದಲ್ಲಿ ಕಳೆಯಿತು. ಇಲ್ಲಿ ಅನೇಕ ಪವಾಡಗಳ ಮುಖಾಂತರ ಪ್ರಭುಗಳು ತಮ್ಮ ಭಕ್ತರ ಶ್ರದ್ಧೆಗೆ ಒಲಿದು ಅವರನ್ನು ಆಶೀರ್ವದಿಸಿದರು. ಪ್ರಭುಗಳ ಕಲ್ಯಾಣ ವಾಸ್ತವ್ಯದಲ್ಲಿ ಜರುಗಿದ ಪವಾಡಗಳಲ್ಲಿ ಕಾಳಂಭಟ್ಟನ ಕಥೆ ಮುಖ್ಯವಾದದ್ದು. ಮೂಲತಃ ಕಲಬುರಗಿಯ ನಿವಾಸಿಯಾದ ಮೆಲಗಿರಿ ಭಟ್ಟನು ಕಪ್ಪು ವರ್ಣದವನಾಗಿರುವುದರಿಂದ ಶ್ರೀ ಪ್ರಭುಗಳು ಪ್ರೀತಿಯಿಂದ ಅವನನ್ನು ‘ಕಾಳಂಭಟ್ಟ’ ಅಥವಾ ‘ಕಾಳ್ಯಾ’ ಎಂದು ಕರೆಯುತ್ತಿದ್ದರು. ಕಾಲಕ್ರಮೇಣವಾಗಿ ಅವನು ಕಲಬುರಗಿ ಬಿಟ್ಟು ಬಸವಕಲ್ಯಾಣದಲ್ಲಿ ಮಾಣಿಕ ಪ್ರಭುಗಳ ಮನೆಯ ಹತ್ತಿರ ವಾಸಿಸಿ, ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದನು. ಶ್ರಾವಣಮಾಸದಲ್ಲಿ ಪ್ರತಿದಿನ ಮನೆಯ ಹತ್ತಿರದಲ್ಲಿರುವ ಸೋಮೇಶ್ವರ ಮಹಾದೇವನ ದೇವಾಲಯಕ್ಕೆ ಹೋಗಿ, ಶಿವಲಿಂಗಕ್ಕೆ ಅಭಿಷೇಕ, ಬಿಲ್ವಾರ್ಚನೆ ಮಾಡಿ, ನೈವೇದ್ಯ, ಆರತಿ ಮಾಡುವ ಕ್ರಮ ವಿಧಿಸಿಕೊಂಡಿದ್ದನು. ಒಂದು ದಿನ ಬಾಳಂಭಟ್ಟನೆಂಬ ಮತ್ತೊಬ್ಬ ಈಶ್ವರ ಆರಾಧಕನು ಕಾಳಂಭಟ್ಟ ಮಾಡಿದ ಪೂಜೆಯನ್ನು ಕೆಡಿಸಿಹಾಕಿ, ತಾನು ಮತ್ತೊಮ್ಮೆ ಶಿವಲಿಂಗಕ್ಕೆ ಅಲಂಕಾರ ಮಾಡಿ ತನ್ನ ಪೂಜೆ ಸಲ್ಲಿಸಿದ. ಈ ಘಟನೆಯಿಂದ ಕುಪಿತಗೊಂಡ ಕಾಳಂಭಟ್ಟ ಬಾಳಂಭಟ್ಟನೊಂದಿಗೆ ಜೋರಾಗಿ ಜಗಳ ಮಾಡಿದ. ಅಲ್ಲಿಯೇ ಸಮೀಪದಲ್ಲಿದ್ದ  ಪ್ರಭುಗಳು ಅವರ ಜಗಳ ನೋಡಿ ಕಾಳಂಭಟ್ಟನನ್ನು ಉದ್ದೇಶಿಸಿ “ಕಲ್ಲಿನ ದೇವರ ಪೂಜೆಯನ್ನು ಕೆಡಿಸಿದರೆಂದು ಇಷ್ಟು ಸಿಟ್ಟಿಗೇಳುವುದು ಬೇಡ. ಭಗವಂತನು ಭಕ್ತಿ ಪ್ರಿಯನೇ ವಿನಃ ಅಲಂಕಾರ ಪ್ರಿಯನಲ್ಲ” ಎಂದು ತಿಳಿ ಹೇಳಿದರು. ಅದಕ್ಕೆ ಅವನು” ನಮ್ಮಂಥವರಿಗೆ ಶಿವನ ನಿಜ ಸ್ವರೂಪ ಕಾಣುವುದು ಹೇಗೆ? ನಮಗೆ ಈ ಕಲ್ಲಿನ ಶಿವಲಿಂಗದ ಪೂಜೆಯಲ್ಲಿಯೇ ಸಮಾಧಾನಗೊಳ್ಳಬೇಕಾಗುತ್ತದೆ” ಎಂದನು. ಕಾಳಂಭಟ್ಟನ ಶ್ರದ್ದಾಭಕ್ತಿಗೆ ಒಲಿದ ಪ್ರಭುಗಳು ಅವನನ್ನು ಕರೆದು “ಕಣ್ಣುಮುಚ್ಚಿ ಶಂಕರನ ಮುಂದೆ ಕುಳಿತುಕೊ” ಎಂದರು. ತುಸು ಹೊತ್ತಿನ ಮೇಲೆ ಕಾಳಂಭಟ್ಟನಿಗೆ ಕಣ್ಣು ತೆರೆಯಲು ಹೇಳಿದರು. ಕಣ್ಣು ತೆರೆದು ನೋಡಿದಾಗ ಜಟಾಜೂಟಧಾರಿ, ವ್ಯಾಘ್ರಚರ್ಮ ಧರಿಸಿದ ಸಾಕ್ಷಾತ್ ಶಂಕರನನ್ನು ಕಂಡು ಕಾಳಂಭಟ್ಟನು ಕೃತಾರ್ಥನಾದನು. ತನ್ನ ಆರಾಧ್ಯ ದೇವತೆಯ ದರ್ಶನದಿಂದ ಕಾಳಂಭಟ್ಟನ ಹರ್ಷ ಮುಗಿಲೇರಿತು.  ನಮಸ್ಕರಿಸಿ ಎದ್ದ ಮರುಕ್ಷಣವೇ ಶಂಕರನ ಸ್ವರೂಪವು ಮಾಯವಾಗಿ ಅಲ್ಲಿ ಮುಸುನಗೆಯೊಂದಿಗೆ ನಿಂತ ಪ್ರಭುಗಳನ್ನು ಕಂಡು ಅವರೇ ಶಿವಸ್ವರೂಪರೆಂದು ಮನದಟ್ಟಿಸಿಕೊಂಡನು. ಅಂದಿನಿಂದ ಶ್ರೀಪ್ರಭುಗಳನ್ನೇ ಶಿವಸ್ವರೂಪರನ್ನಾಗಿ ಭಾವಿಸಿ ಅವರನ್ನೇ ಪೂಜಿಸಲಾರಂಭಿಸಿದನು. ಶ್ರೀಪ್ರಭುಗಳ ಸಮಾಧಿಯ ನಂತರವೂ ಕಾಳಂಭಟ್ಟನು ಮಾಣಿಕನಗರದಲ್ಲಿ ವಾಸಿಸಿ ನಿತ್ಯ  ಪ್ರಭುಸಮಾಧಿಗೆ ರುದ್ರಾಭಿಷೇಕ ಹಾಗು ಬಿಲ್ವಾರ್ಚನೆಯ ಕ್ರಮವನ್ನು ಜೀವನಪರ್ಯಂತ ನಿಷ್ಠೆಯಿಂದ ನಿರ್ವಹಿಸಿದನು.